Sri Madhvacharya
।। ಶ್ರೀ ಗುರುಭ್ಯೋ ನಮಃ ।।
ಪ್ರಥಮೋ ಹನುಮನ್ನಾಮ | ದ್ವಿತೀಯೋ ಭೀಮ ಏವಚ |
ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ||
Shivalli Sabha Logo
← Home All Events

ಶಿವಳ್ಳಿ ಸಭಾ (ರಿ), ಮಂಗಳೂರು: ಪ್ರಪ್ರಥಮ ವಾರ್ಷಿಕ ಮಹಾಸಭೆ

📅 Sunday, 04 Oct 2026 at 03:00 PM
📍 ಶಾರದಾ ವಿದ್ಯಾಲಯ ಮಂಗಳೂರು — View on map
ಶಿವಳ್ಳಿ ಸಭಾ (ರಿ.), ಮಂಗಳೂರು ಇದರ ಪ್ರಪ್ರಥಮ ವಾರ್ಷಿಕ ಮಹಾಸಭೆಯು ದಿನಾಂಕ 04-10-2026 ರಂದು ಮಧ್ಯಾಹ್ನ 3 ಗಂಟೆಗೆ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಂಘದ ಸದಸ್ಯರ ಮಕ್ಕಳಿಂದ ವೇದಘೋಷ ಹಾಗೂ ಸ್ವಸ್ತಿಮಂತ್ರದೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾರಂಭದಲ್ಲಿ ಸಂಚಾಲಕರಾದ ಶ್ರೀ ಗಣೇಶ್ ಹೆಬ್ಬಾರ್ ಅವರು ಆಗಮಿಸಿದ ಅತಿಥಿಗಳನ್ನು ಹಾಗೂ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸದಸ್ಯರೆಲ್ಲರಿಗೂ 'ಶಿವಳ್ಳಿ ಸಭಾ (ರಿ.), ಮಂಗಳೂರು' ಎಂದು ಮುದ್ರಿತವಾಗಿದ್ದ ಶಾಲನ್ನು ವಿತರಿಸಲಾಗಿದ್ದು, ಸದಸ್ಯರು ಅದನ್ನು ಧರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾರದಾ ವಿದ್ಯಾಲಯದ ಮುಖ್ಯಸ್ಥರಾದ ಶ್ರೀ ಎಂ. ಬಿ. ಪುರಾಣಿಕ್, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಕೊರಿಯಾರ್ ಅವರು ಉಪಸ್ಥಿತರಿದ್ದರು. ಗತವರ್ಷದಲ್ಲಿ ಅಗಲಿದ ಸಂಘದ ಪದಾಧಿಕಾರಿಗಳಾದ, ತಾಲೂಕು ಉಪಾಧ್ಯಕ್ಷರಾಗಿದ್ದ ಶ್ರೀ ಪ್ರೇಮನಾಥ್ ರಾವ್ ಹಾಗೂ ದೇರೆಬೈಲ್ ಘಟಕದ ಖಜಾಂಚಿಯಾಗಿದ್ದ ಶ್ರೀ ನಂದಕಿಶೋರ್ ಅವರ ಸೇವೆಗಳನ್ನು ಜತೆಕಾರ್ಯದರ್ಶಿ ಶ್ರೀ ಗಿರೀಶ್ ಭಟ್ ಅವರು ಸ್ಮರಿಸಿದರು. ಸಭೆಯಲ್ಲಿ ಒಂದು ನಿಮಿಷದ ಮೌನಾಚರಣೆಯ ಮೂಲಕ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಕಾರ್ಯದರ್ಶಿ ಶ್ರೀ ಭಾಸ್ಕರ್ ಭಟ್ ಅವರು ಕಳೆದ ವರ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಖಜಾಂಚಿ ಶ್ರೀ ಪ್ರಸನ್ನ ರಾವ್ ಅವರು ಲೆಕ್ಕಪತ್ರಗಳ ವಿವರಗಳನ್ನು ಹಾಗೂ ಮುಂದಿನ ವರ್ಷದ ಆಯವ್ಯಯ (ಬಜೆಟ್) ಪಟ್ಟಿಯನ್ನು ಮಂಡಿಸಿದರು. ಸಭೆಯು ಕರತಾಡನದ ಮೂಲಕ ಇವೆರಡಕ್ಕೂ ಸರ್ವಾನುಮತದ ಅನುಮೋದನೆ ನೀಡಿತು. ಇದೇ ವೇಳೆ, 2026-27ನೇ ಸಾಲಿನ ಲೆಕ್ಕಪರಿಶೋಧಕರಾಗಿ (Auditor) CA ಶ್ರೀ ಅನಂತಪದ್ಮನಾಭ ವೈಲಾಯ ಅವರನ್ನು ನೇಮಕ ಮಾಡಲಾಯಿತು ಹಾಗೂ ತಾತ್ಕಾಲಿಕ ಆಡಳಿತ ಮಂಡಳಿಯ ಅವಧಿಯನ್ನು 2027ರ ಅವಧಿಗೆ ವಿಸ್ತರಿಸಲು ಮಹಾಸಭೆಯು ಒಪ್ಪಿಗೆ ಸೂಚಿಸಿತು.
ಅಧ್ಯಕ್ಷರಾದ ಶ್ರೀ ಉದಯಶಂಕರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಧ್ಯೇಯೋದ್ದೇಶ ಹಾಗೂ ನಿಸ್ವಾರ್ಥ ಸಮಾಜಸೇವೆಯನ್ನು ಶ್ಲಾಘಿಸಿದರು. "ಶಿವಳ್ಳಿ ಸಮಾಜದ ಸಭೆ-ಸಮಾರಂಭಗಳನ್ನು ನಡೆಸಲು ನಮಗೊಂದು ಸ್ವಂತ ಭವನದ (ಸಭಾಂಗಣದ) ಅತ್ಯಗತ್ಯವಿದ್ದು, ಆ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಈ ಬೃಹತ್ ಕಾರ್ಯಕ್ಕೆ ಎಲ್ಲಾ ಸದಸ್ಯರು ಕೈಜೋಡಿಸಿ ಸಂಪೂರ್ಣ ಸಹಕಾರ ನೀಡಬೇಕು" ಎಂದು ವಿನಂತಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಹರ್ಷಿತಾ ಜಿ. ಎಂ. ಅವರು ಅಚ್ಚುಕಟ್ಟಾಗಿ ನಿರೂಪಿಸಿದರು ಹಾಗೂ ಜತೆಕಾರ್ಯದರ್ಶಿ ಶ್ರೀ ರವೀಶ್ ನಾರ್ಶ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ, 'ಮಂಗಳಾ ಮ್ಯಾಜಿಕ್ ವರ್ಲ್ಡ್' ತಂಡದಿಂದ ಏರ್ಪಡಿಸಲಾಗಿದ್ದ ಅಪೂರ್ವ ಜಾದೂ ಪ್ರದರ್ಶನವು ನೆರೆದಿದ್ದವರನ್ನು ರಂಜಿಸಿತು.
ಕೊನೆಯಲ್ಲಿ ಶುಚಿ-ರುಚಿಯಾದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 350 ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದ ಈ ಚೊಚ್ಚಲ ಮಹಾಸಭೆಯು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಮೂಡಿಬಂತು.

🙏 This event has concluded. Thank you to everyone who joined us!
ಈ ಕಾರ್ಯಕ್ರಮ ಮುಗಿದಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

See Upcoming Events
← See all upcoming events